Thursday, 16 June 2011

ಸುಪ್ತಗಾನ

 ಅಲ್ಲಿ ಮಳೆಯಂತೆ
ಬಿಡದೆ ಸುರಿವ ಮಳೆಯಂತೆ
ಹನಿ ಹನಿಯಲ್ಲೂ ಇಣುಕುತ್ತಿರುವುದು  ನನ್ನ ನೆನಪೇ ಅಂತೆ
 ಮುಸ್ಸಂಜೆ ಮಬ್ಬುಗತ್ತಲಲ್ಲಿ 
ದೇವರಿಗೊಂದು ದೀಪ ಬೆಳಗುವಲ್ಲಿ
ಕಂಡ ನೆರಳಲಿ ಹುಡುಕಿದ್ದು ನನ್ನ ಚಿತ್ರವನಂತೆ ...
ಚಂದ್ರನೇ ಇಲ್ಲದ ಆಗಸದಲ್ಲಿ..
ಸಣ್ಣ ಹನಿ ಬೀಳುವಲ್ಲಿ.
ಧ್ವನಿಸಿದ್ದು  ನನ್ನ ಕಾಲಂದುಗೆಯ ಸದ್ದಂತೆ ..

ಆದರೆ ...
ಇಲ್ಲಿ ಮಳೆ ಇಲ್ಲ ...
ನಸುಗತ್ತಲ ಇಳಿಸಂಜೆಯಲ್ಲಿ..
ದೇವರ ಮುಂದೊಂದು ಹಣತೆ ಬೆಳಗುತ್ತಾ
ಮೋಡದಲ್ಲಡಗಿದ ಚಂದಿರನ ಹುಡುಕುತ್ತ ...
ಮುಂಬಾಗಿಲ ಬಳಿಯ ಹೆಜ್ಜೆಯ ದನಿಗೆ ಕಾಯುತ್ತ...
ನಿನ್ನ ನೆನಪಿಗೊಂದು ರಾಗಮಾಲಿಕೆ ಬರೆಯುತ್ತಿರುವ
ಮನದಲ್ಲಿ ಮಾತ್ರ
ನಿನ್ನ ಸುಪ್ತಗಾನದ ಸದ್ದು....
ಇಳೆಗೆ ಕಳೆಯ ತಂದ ಮಳೆಯ ಸದ್ದು!!!!

Wednesday, 8 June 2011

ಜೀವನ






























ಸಾಗರದ ಅಲೆಗಳು...
ಒಂದರ ಹಿಂದೊಂದು..
ಒಂದಕ್ಕೂ ಹೆಸರಿಲ್ಲ..
ಒಂದಕ್ಕೂ ಗುರಿ ಇಲ್ಲ..
ಹಾಗೆ ಬಂದು ಹೀಗೆ ಹೋದ ಅಲೆಗಳು...
ಬರಿಯ ನೀರು ..ಹೆಸರಿಲ್ಲದ ಉಸಿರಿಲ್ಲದ ನೀರು... 

ಬದುಕಿನ ಹೊತ್ತಿಗೆಯಲ್ಲಿ 
ನೂರಾರು ಪುಟಗಳು..
ಹೀಗೆ ಬಂದು ಹಾಗೆ ಹೋದ ಖಾಲಿ ಪುಟಗಳು..
ಕೆಲವಕ್ಕೆ ಬಣ್ಣವಿಲ್ಲ...
ಹಲವಕ್ಕೆ ಪದಗಳಿಲ್ಲ....
ಬರಿಯ ಅಕ್ಷರಗಳು.....ಅರ್ಥವಿಲ್ಲದ ವ್ಯರ್ಥ ಅಕ್ಷರಗಳು... 

ಬಾಳ ಬನದಲ್ಲಿ
ನೂರಾರು ಮರಗಳು..
ಹುಟ್ಟಿ ಮುರುಟಿ ಹೋಗೊ ಸಂಬಂಧಗಳು...
ಕೆಲವಕ್ಕೆ ಒಲವಿಲ್ಲ....
ಉಳಿದವಕ್ಕೆ ಬಲವಿಲ್ಲ..
ಬರಿಯ ಬಂಧಗಳು..ಬೇಡದ ಬಂಧನಗಳು... 

ನೀರಲ್ಲೂ ಜೇನ...ಅಕ್ಷರದಲ್ಲೂ ಹಾಡ.. ಬಂಧನದಲ್ಲೂ ಅನುಬಂಧ 
ಹುಡುಕೋದೆ ಜೀವನ....
ಇದು ಬರಿ ಉಸಿರಲ್ಲ ಗೆಳೆಯ...
ಇದು ಜೀವಾಮೃತ...
ಇದನರಿಯದಿದ್ದರೆ...ಜೀವನ ಅನೃಥ ..

Wednesday, 1 June 2011

ಪಳಿಯುಳಿಕೆ



























ಬಾಗಿಲ ಬಳಿ ಕುಳಿತು ಕಾಯುತ್ತಿದ್ದೇನೆ 
ಪ್ರಿಯಾತಿಪ್ರಿಯರು ಬರುವರೆಂದು...
ನಸುನಕ್ಕು ಮಾತಾಡುವರೆಂದು
ದಿನವೊಂದು ಯುಗದಂತಾಗಿ 
ಕ್ಷಣವೊಂದು ತಾಸಾಗಿ ..
ನಗುವೇ ಮರೆತು ಹೋಗಿ...
ಹೊತ್ತು ಕಳೆಯುತಿಲ್ಲ ನನಗೆ...

ಆ ಕಾಲವೊಂದಿತ್ತು...
ಯುಗಗಳೇ ದಿನಗಳಾಗಿ...
ದಿನವೊಂದು ಕ್ಷಣವಾಗಿ...
ಬದುಕೊಂದು ಬನವಾಗಿ ...
ಇಹ ಪರಗಳ ಸುಖವೆಲ್ಲಾ ಸೂರೆಹೋಗಿ..
ಜಗವೆಲ್ಲ ನಾಕವಾಗಿ...

ಈಗ 
ಕಾಯುತ್ತಲಿದ್ದೇನೆ...
ನಾನು ಬಣ್ಣ ತುಂಬಿದ ಜನರಿಗಾಗಿ...
ನನ್ನಿಂದ ಬೆಳಕ ಪಡೆದವರಿಗಾಗಿ..

ಬರುವರೋ ಬಾರದಿರುವರೋ...

ಬಂದರೂ ಬಾರದಿದ್ದರೂ...
ಕಾಯುತ್ತಲೇ ಇರುವೆ ..

ಏಕೆಂದರೆ..
ಇಂದಲ್ಲ ನಾಳೆ ಅವರೇ ಬರುವರೆಂದು ..

ನನಗಾಗಿಯಲ್ಲ....
ನನ್ನಂತೆ.
ನಸುಕು ಸಂಜೆಯಾದಂತೆ...
ವಯಸ್ಸು ಜಾರಿದಂತೆ...
ಬೆನ್ನು ಬಾಗಿದಂತೆ ...
ವೃದ್ಧಾಶ್ರಮಕ್ಕೆ ...
ನನ್ನಂತೆ....ಪಳಿಯುಳಿಕೆಯಾಗಿ......!!

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...